ಮಲ್ಲಿಕಾರ್ಜುನ ಪಂಡಿತಾರಾಧ್ಯ
ಸು. 1160. ವೀರಶೈವ ಪಂಡಿತರಲ್ಲಿ ಒಬ್ಬರು. ಶ್ರೀಶೈಲ ಸಿಂಹಾಸನದ ಸ್ಥಾಪಕರು. ಗಣಸಹಸ್ರ ನಾಮಾವಳಿ ಎಂಬ ಗ್ರಂಥದ ಕರ್ತೃ. ಇವರು ಶಿವತತ್ತ್ವಸಾರಮು (ತೆಲುಗು), ಗಣಸಹಸ್ರನಾಮಾವಳಿ, ಲಿಂಗೋದ್ಭವ ಗದ್ಯ, ಅಮರೇಶ್ವರಾಷ್ಟಕ, ರುದ್ರಮಹಿಮಾ ಶತಕ, ಮಾಯಾಮೋಚನಾಸ್ತವ ನೀರಾಜನಪದ, ಆನಂದಪದ, ಇಷ್ಟಲಿಂಗಸ್ತುತಿ, ಬಸವಗೀತೆ ಮುಂತಾದ ಗ್ರಂಥಗಳನ್ನೂ ಕಲವು ವಚನಗಳನ್ನೂ ಬರೆದಂತೆ ತಿಳಿಯುತ್ತದೆ. ಶಿವಶರಣರಲ್ಲಿ ಒಬ್ಬನಾದ ಆದಯ್ಯನ ವಚನಗಳಲ್ಲಿ `ಪಂಡಿತಾರಾಧ್ಯರ ಸ್ವಯಂಪಾಕ ಪಂಡಿತಾರಾಧ್ಯರೆನ್ನ ಜಿಹ್ವೆ` ಎಂದು ಉಲ್ಲೇಖಿತನಾಗಿರುವ ವ್ಯಕ್ತಿ ಇವರು ಎಂದು ಹೇಳಲು ಅವಕಾಶವಿದೆ. ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ದ್ರಾಕ್ಷಾರಾಮ ಇವರ ಜನ್ಮಸ್ಥಳ (ಇವರ ಹುಟ್ಟೂರು ಏರಳಪುರವೆಂಬ ವಾದವೂ ಇದೆ.) ಇವರ ತಂದೆ ಭೀಮನ ಪಂಡಿತ, ತಾಯಿ ಗೌರಾಂಬೆ, ಗುರು ಕೋಟಪಲ್ಲಾರಾಧ್ಯ, ಶಿಷ್ಯ ದೋನಮಾರ್ಯ, ಹಿರಿಯಮಗ ಕೇದಾರಾರ್ಯ, ಶ್ರೀಶೈಲದ ಮಲ್ಲಿಕಾರ್ಜುನ ಇಷ್ಟದೈವ.

ಮಲ್ಲಿಕಾರ್ಜುನ ಪಂಡಿತಾರಾಧ್ಯರು ವೆಲನಾಡು ಚೋಳನ ಆಸ್ಥಾನದಲ್ಲಿ ಪರಮಾದಿಗಳನ್ನು ಜಯಿಸಿ ವೀರಶೈವ ಸಿದ್ಧಾಂತವನ್ನು ಸ್ಥಾಪಿಸಿದರೆಂದು ಚೋಳ ರಾಜನು ಇವರ ಕಣ್ಣು ಕೀಳಿಸಲು ಇವರು ಅಮರಾರಾಮಕ್ಕೆ ಬಂದು ಗಣಸಹಸ್ರ ಪಠಿಸಿ ಊಧ್ರ್ವನೇತ್ರ ಪಡೆದರೆಂದೂ ಇವರನ್ನು ಕುರಿತು ಹುಟ್ಟಿರುವ ಪಾಲ್ಕುರಿಕೆ ಸೋಮನಾಥನ (ಸು.1300) ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತ್ರೆ (ತೆಲುಗು), ಗುರುರಾಜನ (ಸು.1430) ಪಂಡಿತಚಾರಿತ್ರ (ಸಂಸ್ಕøತ), ನೀಲಕಂಠಾಚಾರ್ಯನ (ಸು.1485) ಆರಾಧ್ಯಚಾರಿತ್ರ, ಸಿದ್ಧನಂಜೇಶನ (ಸು.1650) ಗುರುರಾಜ ಚಾರಿತ್ರ ಮುಂತಾದ ಗ್ರಂಥಗಳಿಂದ ತಿಳಿದುಬರುತ್ತದೆ.

ಇವರು ಗೃಹಸ್ಥರಾಗಿದ್ದರು. ತಮ್ಮ ಜೀವನದ ಕಡೆಯ ದಿನಗಳಲ್ಲಿ ಶ್ರೀಶೈಲಯಾತ್ರೆ ಹೊರಟು, ಅಶಕ್ತಿಯಿಂದ ಅಲ್ಲಿಗೆ ಹೋಗಲಾರದೆ ಶಿಷ್ಯ ದೋನಮಯ್ಯನ್ನು ಕಳುಹಿಸಿ ಆತ ಹಿಂತಿರುಗಿ ಬಂದು ಶ್ರೀಶೈಲ ವರ್ಣನೆ ಮಾಡುತ್ತಿದ್ದಾಗ ವೆಲ್ಲಟೂರು ಎಂಬಲ್ಲೆ ಸತಿಸಹಿತ ಲಿಂಗೈಕ್ಯರಾದರೆಂದು ತಿಳಿಯುತ್ತದೆ. ವೆಲ್ಲಟೂರಿನಲ್ಲಿ ಇವರ ಸಮಾಧಿಯಿದೆ. ಆಂಧ್ರದ ಪ್ರಸಿದ್ಧಭಾಗವತ ಕರ್ತೃ ಬೊಮ್ಮೆರಪೋತನನ ಗುರು ಯವ್ವಟೂರು ಸೋಮನಾತನು ಮಲ್ಲಿಕಾರ್ಜುನ ಪಂಡಿತಾರಾಧ್ಯರ ವಂಶೀಯನೆಂದು ತಿಳಿದುಬಂದಿದೆ.

ಗಣಸಹಸ್ರ ನಾಮಾವಳಿ ಸಂಸ್ಕøತದಲ್ಲಿ ಲಲಿತರಗಳೆಯಲ್ಲಿ ರಚಿತವಾಗಿದೆ. ಇದು ವೀರಶೈವರ ಒಂದು ಪಾರಾಯಣಗ್ರಂಥ. ಬಸವಣ್ಣನವರ ಸಮಕಾಲೀನ ಮತ್ತು ಹಿಂದಿನ ಶಿವಶರಣರ ಹೆಸರುಗಳೆಲ್ಲವೂ ಇದರಲ್ಲಿ ಬಂದಿವೆ. ಗ್ರಂಥದಲ್ಲಿ ಒಟ್ಟೂ ಒಂದು ಸಾವಿರ ಶಿವಶರಣರ ಹೆಸರುಗಳಿವೆ. ಕೃತಿ ಪ್ರಮಥಗಣ, ರುದ್ರಗಣ, ಯೋಗಾಚಾರ್ಯರು, ತ್ರಿಷಷ್ಟಿಗಣರು ಎಂದು ವಿಭಾಗಗೊಂಡಿದೆ. ಈ ಗ್ರಂಥವನ್ನು ಆಧರಿಸಿ ಪಾಲ್ಕುರಿಕೆ ಸೋಮನಾಥ ಕನ್ನಡ ಹಾಗೂ ತೆಲುಗಿನಲ್ಲಿ ಗಣಸಹಸ್ರ ನಾಮಾವಳಿಯನ್ನೂ ಬರೆದಿದ್ದಾನೆ:
			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
							
	*